Sunday, November 21, 2010

ಕಾಡಿನಲ್ಲಿ ಕಲರವ

ನವೆಂಬರ್ ೧೪ ಪ್ರತಿ ವರ್ಷ ಮಕ್ಕಳ ದಿನಾಚರಣೆ ಆಚರಿಸುವುದು ರೂಡಿ. ಆದರೆ ಅದನ್ನು ಕ್ಲೀಷೆಯಾಗಿ ಭಾಷಣ ಉಪದೇಶಗಳ ಮತ್ತೊಂದು ಸಮಾರಂಭವಾಗಿಸದೆ ಮಕ್ಕಳು ನಿಜಕ್ಕೂ ಖುಷಿಯಾಗುವಂತೆ ಏನು ಮಾಡಬಹುದು ಎಂದು ಚಿಂತಿಸಿದೆವು. ನಾಲ್ಕು ಗೋಡೆಗಳ ಪರಧಿ ದಾಟಿ ಒಂದು ಸಣ್ಣ ಹೊರಸಂಚಾರವನ್ನು ಅಂದು ಹಮ್ಮಿಕೊಂಡೆವು. ನಮ್ಮ ಊರಿಗೆ ಅಂಟಿಕೊಂಡಿರುವ ಕಾಡಿನ ಒಳಹೊಕ್ಕುವಾಗ ಮಕ್ಕಳು ಯಾವುದೋ ಜೈಲಿನಿಂದ ಬಿಡುಗಡೆಗೊಂಡವರಂತೆ ಸಂಭ್ರಮದ ಹೆಜ್ಜೆಗಳನ್ನು ಹಾಕಿದರು. . ಸುಮಾರು ೨ ಕಿಲೋಮೀಟರ್ ದೂರ ಮಕ್ಕಳೊಂದಿಗೆ ಸಾಗಿ ಅಲ್ಲಿ ಎಲ್ಲ ತರಗತಿಯವರಿಗೂ ಹಗ್ಗ ಜಗ್ಗಾಟದ ಆಟ ಆಡಿಸಿದೆವು. ಇದರಲ್ಲಿ ಕೇವಲ ಖುಷಿಯೇ ಆಟದ ಆಕರ್ಷಣೆಯಾಗಿತ್ತು. ಇದಾದ ನಂತರ ಆ ಪ್ರಕೃತಿಯ ಮಡಿಲಲ್ಲಿ ಮಕ್ಕಳು ಕಾಡಿನ ಕುರಿತು ಕಣ್ಣು ಮುಚ್ಚಿ ಧ್ಯಾನ ಮಾಡಿದರು. ಧ್ಯಾನಿಸಿ ಕಂಡುಕೊಂಡ ಸಂಗತಿಗಳನ್ನು ಬರೆದು ಕೊಟ್ಟರು. (ಇದನ್ನು ನಂತರ "ಕಾಡಿನ ಕಲರವ " ಎಂಬ ಸಣ್ಣ ಹೊತ್ತಿಗೆಯಲ್ಲಿ ಪ್ರಕಟಿಸಿದೆವು) ಮಕ್ಕಳು ತಾವು ತಂದಿದ್ದ ಬುತ್ತಿಗಳನ್ನು ಹಂಚಿಕೊಂಡು ಉಂಡರು. ತಾಲೂಕಿನ ಶಿಕ್ಷಣ ಸಂಯೋಜಕರಾದ ಆರ್. ಕೃಷ್ಣಪ್ಪ ನಮ್ಮ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದರು. ಮಕ್ಕಳು ಇವರೊಂದಿಗೆ ಸಣ್ಣ ಸಂವಾದವನ್ನು ಹಮ್ಮಿಕೊಂಡರು. ಆ ನಂತರ ಔಪಚಾರಿಕವಾಗಿ ಮಕ್ಕಳು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಅವರೇ ಸಂಪಾದಿಸಿದ ಮಕ್ಕಳ ಲೇಖನಗಳ ಸಂಗ್ರಹಗಳನ್ನು (ಚಿಕ್ಕ ಮಕ್ಕಳ ಚಿಲಿಪಿಲಿ ಹಾಗೂ ದೀಪ ಬೆಳಗಲಿ ) ಬಿಡುಗಡೆ ಮಾಡಿಸಿದರು. ಈ ರೀತಿಯ ಮಕ್ಕಳ ದಿನಾಚರಣೆಯ ಸಂತಸವನ್ನು ಹಂಚಿಕೊಂಡರು. ಆ ನಂತರ ನಮ್ಮ ಊರಿನ ಕಡೆಗೆ ಹೆಜ್ಜೆ ಹಾಕಿದೆವು.
ಒಟ್ಟಾರೆ ಅಂದಿನ ದಿನ ಒಂದು ಭಾನುವಾರವಾದರೂ ರಜೆ ಎನ್ನದೆ ಮಕ್ಕಳು ಖುಷಿಯಿಂದ ಬಂದಿದ್ದರು. ಖುಷಿಪಡಿಸದೇ ಮಕ್ಕಳಿಗೆ ನೀಡುವ ಒಣ ವಿಷಯಗಳು ಶಿಕ್ಷಣವೇ ?










Saturday, October 9, 2010

ಟಿ.ವಿ. ಯಲ್ಲಿ ನಮ್ಮ ಶಾಲೆ !
ರ್ಕಾರಿ ಶಾಲೆಗಳಿಗೆ ಪ್ರಚಾರ ಬೇಕೆ ? ಬೇಡವೆ ? ಇದೊಂದು ಚರ್ಚೆಯ ವಿಷಯವಾಗಬಹುದು. ಇರಲಿ ನಮ್ಮ ಪುಟ್ಟ ಹಳ್ಳಿಗೆ ಟಿ.ವಿ.ಯವರು ಬಂದಿದ್ದು ಅದೇನೂ ಒಂದು ಸಣ್ಣ ಹೆಮ್ಮೆಯ ಅಲೆಯನ್ನು ನಮ್ಮ ಹಳ್ಳಿಯಲ್ಲಿ ಮೂಡಿಸಿತು. ಸಮಯ ಹಾಗೂ ಸುವರ್ಣ ಚಾನೆಲ್ ನ ವರದಿಗಾರರು ನಮ್ಮ ಶಾಲೆಗೆ ಭೇಟಿ ನೀಡಿ ನಮ್ಮ ಶಾಲೆಯ ಕಾರ್ಯಕ್ರಮಗಳ ಕುರಿತು ಒಂದು ವರದಿ ಮಾಡಿದರು. ಅವರ ಕ್ಯಾಮೆರಾಗಳು, ಇನ್ನಿತರ ಸಾಧನಗಳು ಹಾಗು ಅವರು ಮಾತನಾಡುವ typical ಕನ್ನಡ , ಅವರ ನಿರೂಪಣ ಶೈಲಿ ಇವೆಲ್ಲ ಮಕ್ಕಳಿಗೆ ಕುತೂಹಲದ ವಿಷಯಗಳಾಗಿದ್ದವು. ಮುಕ್ಕಾಲು ದಿನ ಕಳೆದ ಟಿ.ವಿ. ತಂಡದವರು ಈ ನಮ್ಮ ಶಾಲೆಗೆ ಶುಭ ಕೋರಿ ಹೋದರು.

ಖೋ-ಖೋ ಎಂಬ ಕನಸು !
ನಮ್ಮ ಶಾಲೆಯಲ್ಲಿ ದೈಹಿಕ ಶಿಕ್ಷಕರು ಇಲ್ಲ. ಆದರೂ ಮಕ್ಕಳಾದಿಯಾಗಿ ಶಿಕ್ಷಕರಿಗೆ ಖೋ-ಖೋ ಎಂದರೆ ಅದೊಂದು ಮೋಹ. ಇದುವರೆಗೂ ರಾಜ್ಯ ಮಟ್ಟದಲ್ಲಿಯೂ ನಾಲ್ಕು ಬಾರಿ ಭಾಗವಹಿಸಿರುವ ನಮ್ಮ ಶಾಲೆಯ ಮಕ್ಕಳಿಗೆ ತುಂಬು ಉತ್ಸಾಹದಿಂದ ದೈಹಿಕ ಶಿಕ್ಷಕರಿಗೂ ಹೆಚ್ಚಾಗಿ ತರಬೇತಿ ನೀಡುತ್ತಿರುವವರು ನಮ್ಮ ಶಾಲೆಯ ಶಿಕ್ಷಕರಾದ ಜೆ. ಶ್ರೀನಿವಾಸ ಹಾಗು ಎಚ್. ಬಿ. ಮಂಜುನಾಥ್ ರವರು. ಈ ಶೈಕ್ಷಣಿಕ ವರ್ಷದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಹಾಗು ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಲಭಿಸಿದೆ.

ಈಗ ತಿಂಗಳಿಗೊಂದು ಬೇಲಿ ಹೂ

ಮಕ್ಕಳ ಬರವಣಿಗೆಬಗ್ಗೆ ಮೊದಲಿನಿಂದಲೂ ಆಸಕ್ತಿ ಇಟ್ಟುಕೊಂಡಿರುವ ನಮ್ಮ ಶಾಲೆಯ ವತಿಯಿಂದ ಈಗ ಇನ್ನೊಂದು ಪ್ರಯೋಗ ಶುರು ಮಾಡಿದ್ದೇವೆ . ಅದು ಶಾಲಾ ಭಿತ್ತಿ ಪತ್ರಿಕೆಯ ರಚನೆ. ಅದಕ್ಕೆ ಇಟ್ಟಿರುವ ಹೆಸರು " ಬೇಲಿ ಹೂ " . ಈ ತಳುಕಿನ ಯುಗದಲ್ಲಿ ಎಂಥೆಂಥದೋ ಹೂಗಳ ಅಮಲಿನ ನಡುವೆ ಬೇಲಿ ಹೂ ಒಂದು ನಗಣ್ಯ ಪಾಪದ ಹೂ ಆಗಿ ಹೋಗಿದೆ. ಒಂದು ರೀತಿಯಲ್ಲಿ ಸರ್ಕಾರೀ ಶಾಲೆಗಳಿಗೆ ಹೊಂದಬಹುದಾದ ಒಳ್ಳೆಯ ರೂಪಕವೂ ಹೌದು ! ಈ ಬೇಲಿ ಹೂ ನ ಅಂತರಂಗದಲ್ಲಿ ಮಕ್ಕಳ ಬರವಣಿಗೆಗೆ ಅವಕಾಶಗಳಿವೆ. ಈ ಬೇಲಿ ಹೂ ನ ಮೊದಲ ಪ್ರತಿ ಸೆಪ್ಟೆಂಬರ್ ೨೬ ರಂದು ಆರಳಿತು. ಪ್ರತಿ ತಿಂಗಳಿಗೊಂದು ಬೇಲಿ ಹೂ ಹೊರತರುವ ಐಡಿಯಾ ಇದೆ. ಇದರಿಂದ ಮಕ್ಕಳಲ್ಲಿ ಬರೆಯುವ, ಚಿಂತಿಸುವ ಹಾಗೂ ಓದುವ ಅವಕಾಶಗಳು ವಿಫುಲವಾಗಲಿ ಎಂಬ ಆಶೆ ನಮ್ಮದು.
ಶಾಲೆಗೊಂದು ಪ್ರಯೋಗಶಾಲೆ !

ವಿಜ್ಞಾನದಂತಹ ಸಂಕೀರ್ಣ ವಿಷಯ ಬೋಧನೆಗೆ ಕೇವಲ ಮಾತಿನ ವಿವರಣೆ ಸಾಲದು. ಹೇಳಿಕೊಟ್ಟದ್ದಕ್ಕೆನೆನಪು ತಾತ್ಕಾಲಿಕ ಆದರೆ ಸ್ವತಹ ಮಾಡಿದ್ದರ ನೆನಪು ಹೆಚ್ಚು ಕಾಲ. ಹೀಗೆ ಸ್ವತಹ ಮಕ್ಕಳು ವಿಜ್ಞಾನ ಕಲಿಕೆಯಲ್ಲಿ ತೊಡಗಲು ಒಂದು ಪ್ರಯೋಗಶಾಲೆ ಅವಶ್ಯಕ. ಇಂತಹದೊಂದು ಅವಶ್ಯಕತೆ ನಮಗೆ ಬಹಳ ವರ್ಷಗಳಿಂದ ಇದ್ದಿತ್ತು. ಆದರೆ ಸಂತೆಕಲ್ಲಹಳ್ಳಿ ಇಂದಿರಾರ್ಪಣಂ ವೇಣುಗೋಪಾಲ್ ಹಾಗು ಇವರ ಪುತ್ರ ಸಂಜಯ್ ರವರ ಕಾಳಜಿಯ ಫಲವಾಗಿ ನಮ್ಮ ಪ್ರಯೋಗಶಾಲೆ ಎಂಬ ಅವಶ್ಯಕತೆ ಈಡೇರಿತು. ಸಂಜಯ್ ರವರು ಕಾರ್ಯ ನಿರ್ವಹಿಸುವ ಹನಿವೆಲ್ ಕಂಪೆನಿಯ ಮೂಲಕ ಸುಮಾರು ೩೫,೦೦೦ ರುಪಾಯಿ ಬೆಲೆಬಾಳುವ ಪ್ರಯೋಗಶಾಲೆಯ ಸಾಮಗ್ರಿಗಳು, ಅತ್ಯಮೂಲ್ಯಪುಸ್ತಕಗಳು ಹಾಗು ನೀರಿನ ಫಿಲ್ಟರ್ ಗಳನ್ನು ಶಾಲೆಗೆ ನೀಡಿದರು. ಈ ಸಾಮಗ್ರಿಗಳನ್ನು ಶಾಲೆಗೆ ಸಮರ್ಪಿಸುವ ಸಮಾರಂಭವನ್ನು ೨೬.೦೯.೨೦೧೦ ರ ಭಾನುವಾರ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೇ ಸಮಾರಂಭದಲ್ಲಿ ಬೆಂಗಳೂರಿನ ವಿಜ್ಞಾನಿ ಶಿವ ಸುಂದರಂ ರವರು ಅಂಗನವಾಡಿ ಮಕ್ಕಳಿಗಾಗಿ ಕೂರಲು ಜಮಖಾನೆಗಳನ್ನು ನೀಡಿದರು. ಸುಮದುರ ಕಂಠ ಹಾಗೂ ಕ್ರೀಡಾಪಟು ಆದ ಕುಮಾರಿ ದಿವ್ಯ ಎಂಬ ಗ್ರಾಮೀಣ ಪ್ರತಿಭೆಯನ್ನು ಪುರಸ್ಕರಿಸಲಾಯಿತು. ಖೋ-ಖೋ ಆಟದಲ್ಲಿ ನಮ್ಮ ಶಾಲೆ ಪಡೆದಿದ್ದ ತಾಲೂಕು ಹಾಗೂ ಜಿಲ್ಲ ಮಟ್ಟದ ಬಹುಮಾನಗಳನ್ನು ಮತ್ತು ತಾಲೂಕು ಮಟ್ಟದ ಭಾವ ಗೀತೆ ಸ್ಪರ್ದೆಯ ಬಹುಮಾನಗಳನ್ನು ಇದೇ ಸಮಾರಂಭದಲ್ಲಿ ವಿತರಿಸಲಾಯಿತು.
ಶಾಲಾಭಿತ್ತಿ ಪತ್ರಿಕೆಯಾದ ಬೇಲಿಹೂ ನ್ನು ಅನಾವರಣ ಮಾಡಲಾಯಿತು.

Friday, October 8, 2010

ನೀವಂದ್ರೆ ನಮಗಿಷ್ಟ . . . ! ಹೀಗಂದವರು ನಮ್ಮ ಶಾಲೆಯ ಮಕ್ಕಳು. ನಾಲ್ಕು ಗೋಡೆಗಳ ನಿರ್ಜೀವ ಅವಕಾಶದಲ್ಲಿ ಪರಸ್ಪರ ಎಡತಾಕುವ ಎರಡು ಜೀವಗಳು ಈ ಗುರು-ಶಿಷ್ಯರು. ನಡುವಿನ ಮಾನವ ಸಂಬಂದ ಜಿನುಗುತಿದ್ದಸ್ಟು ಶಿಕ್ಷಣದ ಫಸಲು ಹಸಿರು !
ದಿನಾಂಕ ೧೪.೦೯.೨೦೧೦ ಮಂಗಳವಾರ ಹೀಗೊಂದು ಪರಸ್ಪರರ ಪ್ರೀತಿ ಜಿನುಗಿಸುವ ಕಾರ್ಯಕ್ರಮವೊಂದು ನಮ್ಮ ಶಾಲೆಯಲ್ಲಿ ನೆರವೇರಿತು. ಅಂದು ಮಕ್ಕಳು ತಮ್ಮ ಪ್ರೀತಿಯ ಶಿಕ್ಷಕರಿಗೆ ಪ್ರೀತಿ ವ್ಯಕ್ತಪಡಿಸುವುದಕ್ಕೆ ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಿದ್ದರು. ಅಂದು ಶಾಲೆಗೆ ಬಂದ ಶಿಕ್ಷಕರಿಗೆಲ್ಲ ಮಕ್ಕಳು ಹೂ ಹಾಗು ಸಿಹಿ ನೀಡಿ ಶುಭಾಶಯ ಕೋರಿದರು.

ಮಧ್ಯಾಹ್ನ ಒಂದು ಸರಳ ಕಾರ್ಯಕ್ರಮವನ್ನು ಮಕ್ಕಳೇ ರೂಪಿಸಿದ್ದರು. ನಮಗಾಗಿ ಆಶುಭಾಷಣ, ಬಕೆಟ್ನಲ್ಲಿ ಬಾಲು ಹಾಗು ಗಬಗಬನೆ ತಿನ್ನುವ ಸ್ಪರ್ದೆಗಳನ್ನುಇಟ್ಟಿದ್ದರು. ಪ್ರತಿ ಶಿಕ್ಷಕರ ಕುರಿತು ಮಕ್ಕಳು ಅನಿಸಿಕೆ ವ್ಯಕ್ತಪಡಿಸಿದರು. ಕೆಲವು ಮಕ್ಕಳಂತೂ ಹಾಡನ್ನೇ ಕಟ್ಟಿ ಹಾಡಿದರು. ಇದಲ್ಲದೆ ಮಕ್ಕಳೇ ಚೂರುಹಣ ಸಂಗ್ರಹಿಸಿ ಶಿಕ್ಷಕರಿಗೆ ಬಹುಮಾನಗಳನ್ನು ಹಾಗೂ ಎಲ್ಲರಿಗೂ ಸಿಹಿ ವ್ಯವಸ್ತೆ ಮಾಡಿದ್ದರು. ಈ ಪ್ರೀತಿ ನಮ್ಮಲ್ಲಿ ಇನ್ನೊಂದಸ್ಟು ಜವಾಬ್ದಾರಿಯನ್ನು ಹೆಚ್ಚಿಸಿತು.

Wednesday, August 18, 2010

ಸ್ವಾತಂತ್ರ್ಯ ದಿನದ ಅತಿಥಿ !

ನಮ್ಮ ಶಾಲೆಯ ಹೃದಯ ಭಾಗದ ವೇದಿಕೆಯಲ್ಲಿ ಈಗ ಒಬ್ಬ ಹೊಸ ಅತಿಥಿ ವಿರಾಜಮಾನರಾಗಿದ್ದಾರೆ. ಅವರೇ ನಮ್ಮ ಗಾಂಧಿ ! ಸ್ವತಂತ್ರ ದಿನದ ಕೊಡುಗೆಯಾಗಿ ನಮ್ಮ ಶಾಲೆಯ ಹೆಮ್ಮೆಯ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಮುನಿರಾಜಗೌಡರವರು ಗಾಂಧಿ ಪುತ್ಥಳಿಯನ್ನು ಶಾಲೆಗೆ ನೀಡಿದ್ದಾರೆ. ಇದಕ್ಕೆ ತಗುಲಿದ ಖರ್ಚು ಸುಮಾರು ೩೦,೦೦೦ ರೂ ! ನಮ್ಮ ಗ್ರಾಮದ ಯುವ ಉತ್ಸಾಹಿ ಸಂಘಟನೆಯಾದ ಸ್ನೇಹ ಯುವಕರ ಸಂಘ ಶಾಲೆಗೆ ಪ್ರೀತಿಯಿಂದ ಧ್ವನಿವರ್ದಕವನ್ನು ೧೨,೦೦೦ ರೂ. ವೆಚ್ಚದಲ್ಲಿ ನೀಡಿದರು. ಇವರೆಲ್ಲರ ಕಾಳಜಿ ಅನನ್ಯವಾದುದು ! ಅದೇ ರೀತಿ ನಿವೃತ್ತ ವ್ಯವಸ್ತಾಪಕರಾದ ಸಿದ್ದಪ್ಪರವರು ೫೦ ಮಕ್ಕಳಿಗೆ ನಿಘಂಟುಗಳನ್ನು ನೀಡಿದರು. ಇದೆಲ್ಲ ನಡೆದದ್ದು ಆಗಸ್ಟ್ ೧೫ ರ ಸ್ವತಂತ್ರ ದಿನದಂದು . ಅಂದು ಶಿಡ್ಲಘಟ್ಟದ ಹಿರಿಯ ನಾಯಕರಾದ ಶ್ರೀ ರಾಮಚಂದ್ರಾಚಾರ್ ರವರು ಹಾಗು ಮಾಜಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಆರ್. ಶ್ರೀನಿವಾಸ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಕ್ಕಳೇ ನಿರ್ವಹಿಸಿದರು. ಮಕ್ಕಳು ಮೆರವಣಿಗೆ , ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಂದಿನಂತೆ ಉತ್ಸಾಹದಿಂದ ಭಾಗವಹಿಸಿದರು.