Wednesday, August 18, 2010

ಸ್ವಾತಂತ್ರ್ಯ ದಿನದ ಅತಿಥಿ !

ನಮ್ಮ ಶಾಲೆಯ ಹೃದಯ ಭಾಗದ ವೇದಿಕೆಯಲ್ಲಿ ಈಗ ಒಬ್ಬ ಹೊಸ ಅತಿಥಿ ವಿರಾಜಮಾನರಾಗಿದ್ದಾರೆ. ಅವರೇ ನಮ್ಮ ಗಾಂಧಿ ! ಸ್ವತಂತ್ರ ದಿನದ ಕೊಡುಗೆಯಾಗಿ ನಮ್ಮ ಶಾಲೆಯ ಹೆಮ್ಮೆಯ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಮುನಿರಾಜಗೌಡರವರು ಗಾಂಧಿ ಪುತ್ಥಳಿಯನ್ನು ಶಾಲೆಗೆ ನೀಡಿದ್ದಾರೆ. ಇದಕ್ಕೆ ತಗುಲಿದ ಖರ್ಚು ಸುಮಾರು ೩೦,೦೦೦ ರೂ ! ನಮ್ಮ ಗ್ರಾಮದ ಯುವ ಉತ್ಸಾಹಿ ಸಂಘಟನೆಯಾದ ಸ್ನೇಹ ಯುವಕರ ಸಂಘ ಶಾಲೆಗೆ ಪ್ರೀತಿಯಿಂದ ಧ್ವನಿವರ್ದಕವನ್ನು ೧೨,೦೦೦ ರೂ. ವೆಚ್ಚದಲ್ಲಿ ನೀಡಿದರು. ಇವರೆಲ್ಲರ ಕಾಳಜಿ ಅನನ್ಯವಾದುದು ! ಅದೇ ರೀತಿ ನಿವೃತ್ತ ವ್ಯವಸ್ತಾಪಕರಾದ ಸಿದ್ದಪ್ಪರವರು ೫೦ ಮಕ್ಕಳಿಗೆ ನಿಘಂಟುಗಳನ್ನು ನೀಡಿದರು. ಇದೆಲ್ಲ ನಡೆದದ್ದು ಆಗಸ್ಟ್ ೧೫ ರ ಸ್ವತಂತ್ರ ದಿನದಂದು . ಅಂದು ಶಿಡ್ಲಘಟ್ಟದ ಹಿರಿಯ ನಾಯಕರಾದ ಶ್ರೀ ರಾಮಚಂದ್ರಾಚಾರ್ ರವರು ಹಾಗು ಮಾಜಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಆರ್. ಶ್ರೀನಿವಾಸ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಕ್ಕಳೇ ನಿರ್ವಹಿಸಿದರು. ಮಕ್ಕಳು ಮೆರವಣಿಗೆ , ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಂದಿನಂತೆ ಉತ್ಸಾಹದಿಂದ ಭಾಗವಹಿಸಿದರು.

Monday, August 2, 2010

ಜಿಗಿ ಜಿಗಿಯುತ . . .. !





ಜಿಗಿದಾಟ, ನೆಗೆದಾಟ, ಕುಣಿದಾಟ ಕೊನೆಗೆ ಮಂಗದಾಟ ಇವೆಲ್ಲ ಮಕ್ಕಳಿಗೆ ಅದೆಷ್ಟು ಖುಷಿ ಕೊಡುತ್ತವೆ. ಪಾಠಕಿಂತ ! ಅಂಥಹ ಆಟಗಳ ಸಂಭ್ರಮದಲ್ಲಿ ಮುಳುಗಿರುವ ನಮ್ಮ ಮಕ್ಕಳ ಫೋಟೊಗಳಿವು. ಎತ್ತರ ಜಿಗಿತದ ಸ್ಪರ್ದೆಯಲ್ಲಿ ಜಿಗಿ-ಜಿಗಿದ ಈ ಮಕ್ಕಳ ಮುಖದಲ್ಲಿನ ಭಾವಗಳು ತಮಾಷೆಯಾಗಿವೆ ! ಕೆಲವರು ನಗುತ್ತ ಅನಾಯಾಸವಾಗಿ ಜಿಗಿಯುತ್ತಿದ್ದಾರೆ. ಇನ್ನು ಕೆಲವರು ತಮ್ಮ ಶಕ್ತಿಯನೆಲ್ಲ ಒಟ್ಟುಗೂಡಿಸಿ ಅವುಡುಗಚ್ಚಿ ಚಿತ್ರ-ವಿಚಿತ್ರವಾಗಿ ತಮ್ಮ ದೇಹವನ್ನು ಜಿಗಿತದ ಕಾಯಕಕ್ಕೆ ತೇಲಿಬಿಡುತ್ತಿದ್ದಾರೆ .
ಈ ಜಿಗಿತದ ಚಿತ್ರಗಳು ಜೀವನದ ಯಾವುದೋ ರೂಪಕಗಳಂತೆ ಭಾಸವಾದರೂ ಆಶ್ಚರ್ಯವಿಲ್ಲ. ಏಕೆಂದರೆ ಶಿಕ್ಷಣವೂ ಪರಿಪೂರ್ಣತೆಯೆಡೆಗೆ ಹೂಡುವ ಒಂದು ಜಿಗಿತವಲ್ಲವೇ ?!