Sunday, November 21, 2010

ಕಾಡಿನಲ್ಲಿ ಕಲರವ

ನವೆಂಬರ್ ೧೪ ಪ್ರತಿ ವರ್ಷ ಮಕ್ಕಳ ದಿನಾಚರಣೆ ಆಚರಿಸುವುದು ರೂಡಿ. ಆದರೆ ಅದನ್ನು ಕ್ಲೀಷೆಯಾಗಿ ಭಾಷಣ ಉಪದೇಶಗಳ ಮತ್ತೊಂದು ಸಮಾರಂಭವಾಗಿಸದೆ ಮಕ್ಕಳು ನಿಜಕ್ಕೂ ಖುಷಿಯಾಗುವಂತೆ ಏನು ಮಾಡಬಹುದು ಎಂದು ಚಿಂತಿಸಿದೆವು. ನಾಲ್ಕು ಗೋಡೆಗಳ ಪರಧಿ ದಾಟಿ ಒಂದು ಸಣ್ಣ ಹೊರಸಂಚಾರವನ್ನು ಅಂದು ಹಮ್ಮಿಕೊಂಡೆವು. ನಮ್ಮ ಊರಿಗೆ ಅಂಟಿಕೊಂಡಿರುವ ಕಾಡಿನ ಒಳಹೊಕ್ಕುವಾಗ ಮಕ್ಕಳು ಯಾವುದೋ ಜೈಲಿನಿಂದ ಬಿಡುಗಡೆಗೊಂಡವರಂತೆ ಸಂಭ್ರಮದ ಹೆಜ್ಜೆಗಳನ್ನು ಹಾಕಿದರು. . ಸುಮಾರು ೨ ಕಿಲೋಮೀಟರ್ ದೂರ ಮಕ್ಕಳೊಂದಿಗೆ ಸಾಗಿ ಅಲ್ಲಿ ಎಲ್ಲ ತರಗತಿಯವರಿಗೂ ಹಗ್ಗ ಜಗ್ಗಾಟದ ಆಟ ಆಡಿಸಿದೆವು. ಇದರಲ್ಲಿ ಕೇವಲ ಖುಷಿಯೇ ಆಟದ ಆಕರ್ಷಣೆಯಾಗಿತ್ತು. ಇದಾದ ನಂತರ ಆ ಪ್ರಕೃತಿಯ ಮಡಿಲಲ್ಲಿ ಮಕ್ಕಳು ಕಾಡಿನ ಕುರಿತು ಕಣ್ಣು ಮುಚ್ಚಿ ಧ್ಯಾನ ಮಾಡಿದರು. ಧ್ಯಾನಿಸಿ ಕಂಡುಕೊಂಡ ಸಂಗತಿಗಳನ್ನು ಬರೆದು ಕೊಟ್ಟರು. (ಇದನ್ನು ನಂತರ "ಕಾಡಿನ ಕಲರವ " ಎಂಬ ಸಣ್ಣ ಹೊತ್ತಿಗೆಯಲ್ಲಿ ಪ್ರಕಟಿಸಿದೆವು) ಮಕ್ಕಳು ತಾವು ತಂದಿದ್ದ ಬುತ್ತಿಗಳನ್ನು ಹಂಚಿಕೊಂಡು ಉಂಡರು. ತಾಲೂಕಿನ ಶಿಕ್ಷಣ ಸಂಯೋಜಕರಾದ ಆರ್. ಕೃಷ್ಣಪ್ಪ ನಮ್ಮ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದರು. ಮಕ್ಕಳು ಇವರೊಂದಿಗೆ ಸಣ್ಣ ಸಂವಾದವನ್ನು ಹಮ್ಮಿಕೊಂಡರು. ಆ ನಂತರ ಔಪಚಾರಿಕವಾಗಿ ಮಕ್ಕಳು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಅವರೇ ಸಂಪಾದಿಸಿದ ಮಕ್ಕಳ ಲೇಖನಗಳ ಸಂಗ್ರಹಗಳನ್ನು (ಚಿಕ್ಕ ಮಕ್ಕಳ ಚಿಲಿಪಿಲಿ ಹಾಗೂ ದೀಪ ಬೆಳಗಲಿ ) ಬಿಡುಗಡೆ ಮಾಡಿಸಿದರು. ಈ ರೀತಿಯ ಮಕ್ಕಳ ದಿನಾಚರಣೆಯ ಸಂತಸವನ್ನು ಹಂಚಿಕೊಂಡರು. ಆ ನಂತರ ನಮ್ಮ ಊರಿನ ಕಡೆಗೆ ಹೆಜ್ಜೆ ಹಾಕಿದೆವು.
ಒಟ್ಟಾರೆ ಅಂದಿನ ದಿನ ಒಂದು ಭಾನುವಾರವಾದರೂ ರಜೆ ಎನ್ನದೆ ಮಕ್ಕಳು ಖುಷಿಯಿಂದ ಬಂದಿದ್ದರು. ಖುಷಿಪಡಿಸದೇ ಮಕ್ಕಳಿಗೆ ನೀಡುವ ಒಣ ವಿಷಯಗಳು ಶಿಕ್ಷಣವೇ ?










No comments:

Post a Comment